Friday 1 December 2017

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 1: 93 - 100

ಯಥಾಕ್ರಮಂ ಗುಣೋದ್ರೇಕಾತ್ ತದನ್ಯೈರಾ ವಿರಿಞ್ಚತಃ ।
ಬ್ರಹ್ಮತ್ವಯೋಗ್ಯಾ ಋಜವೋ ನಾಮ ದೇವಾಃ ಪೃಥಗ್ಗಣಾಃ ॥೧.೯೩॥

ತೈರೇವಾಪ್ಯಂ ಪದಂ ತತ್ತು ನೈವಾನ್ಯೈಃ ಸಾಧನೈರಪಿ ।
ಏವಂ ಸರ್ವಪದಾನಾಂ ಚ ಯೋಗ್ಯಾಃ ಸನ್ತಿ ಪೃಥಗ್ ಗಣಾಃ ॥೧.೯೪॥

ತಸ್ಮಾದನಾದ್ಯನನ್ತಂ ಹಿ ತಾರತಮ್ಯಂ ಚಿದಾತ್ಮನಾಮ್ ।
ತಚ್ಚ ನೈವಾನ್ಯಥಾ ಕರ್ತುಂ ಶಕ್ಯಂ ಕೇನಾಪಿ ಕುತ್ರಚಿತ್ ॥೧.೯೫॥

ಮನುಷ್ಯರಿಂದಾರಂಭಿಸಿ ಚತುರ್ಮುಖನವರೆಗಿನ ಜೀವಗಣ,
ಉಪಾಸನಾ ಮಾರ್ಗ ಅವಲಂಬಿತ-ಅನುಸರಿಸಿ ಗುಣಾನುಸಂಧಾನ,
ಮಹಾಭಾರತಕ್ಕೆ ಮುಖ್ಯ ಅಧಿಕಾರಿ ಬ್ರಹ್ಮದೇವ,
ಯಾರೀ ಬ್ರಹ್ಮ?  -  ಏನೀತನ ಗುಣ ಸ್ವಭಾವ?
ಬ್ರಹ್ಮಪದವಿ ಯೋಗ್ಯವದು ವಿಶೇಷ  ಋಜುಗಣ,
ಅವರಲ್ಲಿ ಮಾತ್ರವಿದೆಯದು ಯೋಗ್ಯತಾ ಹೂರಣ.

ಇರಲದು ಯಾವುದೇ ದೇವತಾ- ಸ್ಥಾನ,
ಅದಕ್ಕಿದೆ ಅದರದೇ ಆದ ಸ್ಥಾನ ಮಾನ,
ಆಯಾ ಪದವಿ ಯೋಗ್ಯ ದೇವತೆಗಳ ಗಣ,
ಇದ್ದೇ ಇದೆ ತಪ್ಪಿಸಲಾಗದ ತಾರತಮ್ಯದ ಗುಣ,
ಅಲ್ಲಗಳೆಯಲಾಗದ ಮುರಿಯಲಾಗದ ಮಾಪನ,
ಸ್ವಭಾವಯೋಗ್ಯ - ತಾರತಮ್ಯೋಕ್ತ--ದೈವ ಶಾಸನ.
ಅಯೋಗ್ಯಮಿಚ್ಛನ್ ಪುರುಷಃ ಪತತ್ಯೇವ ನ ಸಂಶಯಃ ।
ತಸ್ಮಾದ್ ಯೋಗ್ಯಾನುಸಾರೇಣ ಸೇವ್ಯೋ ವಿಷ್ಣುಃ ಸದೈವ ಹಿ ॥೧.೯೬॥

ಜೀವಕ್ಕೆ ಯೋಗ್ಯವಲ್ಲದ ಸ್ಥಾನಮಾನದ ಬಯಕೆ,
ನಿಶ್ಚಯವದು ಅಧಃಪತನದ ಶಿಕ್ಷೆಯ ಕಾಣಿಕೆ,
ಜೀವರ ಯೋಗ್ಯತಾನುಸಾರವಾಗಿ ಭಗವಂತ ಸೇವ್ಯ,
ಯೋಗ್ಯತಾನುಸಾರ ಭಕ್ತಿಯ ಸಂಕಲ್ಪವದು -ಸಹ್ಯ.

ಅಚ್ಛಿದ್ರಸೇವನಾಚ್ಚೈವ ನಿಷ್ಕಾಮತ್ವಾಚ್ಚ ಯೋಗ್ಯತಃ ।
ದ್ರಷ್ಟುಂ ಶಕ್ಯೋ ಹರಿಃ ಸರ್ವೈರ್ನಾನ್ಯಥಾ ತು ಕಥಞ್ಚನ ॥೧.೯೭॥

ತಪ್ಪುಗಳಿರದ ಕಾಮನೆಯಿರದ ನೈಜ ಭಕ್ತಿ,
ಯೋಗ್ಯತಾನುಸಾರ ನಿಷ್ಠೆಯಿಂದ ಕೂಡಿದ ಯುಕ್ತಿ,
ಸಿಗುತ್ತದೆ ಅದು ಪರಮಾತ್ಮನ ಅನುಗ್ರಹದ ಭಾಗ್ಯ,
ಆಗುತ್ತಾರೆ ಪರಮಾತ್ಮನನ್ನು ಕಾಣಲು ಯೋಗ್ಯ,
ಭಗವದ್ದರ್ಶನ ಎಂದರೆ ಅವನ ದೇಹ ನೋಡುವುದಲ್ಲ,
ಅವನ ಗುಣೋತ್ಕರ್ಷದ ಜ್ಞಾನವದು ಆಗಲೇಬೇಕಲ್ಲ!





ನಿಯಮೋsಯಂ ಹರೇರ್ಯಸ್ಮಾನ್ನೋಲ್ಲಙ್ಘ್ಯಃ ಸರ್ವಚೇತನೈಃ ।
ಸತ್ಯಸಙ್ಕಲ್ಪತೋ ವಿಷ್ಣುರ್ನಾನ್ಯಥಾ ಚ ಕರಿಷ್ಯತಿ ॥೧.೯೮ll

ಮೇಲಿನೆಲ್ಲಾ ನೇಮಗಳುಂಟು ಅನಾದಿ ಕಾಲದಿಂದ,
ಅವನನುಗ್ರಹ ಸಾಧ್ಯವಿಲ್ಲ ಬೇರೆ ಯಾವುದರಿಂದ,
ಲೌಕಿಕ ಸಾಧನೆಗಳಿಗೆ ಹತ್ತಾರು ಮಾರ್ಗಗಳುಂಟು,
ಮೇಲಿನ ನೀತಿಯೊಂದೇ ಸತ್ಯಸಂಕಲ್ಪನ ಒಲಿಸುವ ಗುಟ್ಟು.

ದಾನತೀರ್ಥತಪೋಯಜ್ಞಪೂರ್ವಾಃ ಸರ್ವೇsಪಿ ಸರ್ವದಾ ।
ಅಙ್ಗಾನಿ ಹರಿಸೇವಾಯಾಂ ಭಕ್ತಿಸ್ತ್ವೇಕಾ ವಿಮುಕ್ತಯೇ’ ।
ಭವಿಷ್ಯತ್ಪರ್ವವಚನಮಿತ್ಯೇದದಖಿಲಂ ಪರಮ್ ॥೧.೯೯ll

ದಾನ -ತೀರ್ಥಸ್ನಾನ -ಜಪ- ತಪ -ಇತ್ಯಾದಿ ಯಜ್ಞ,
ಅನುಗ್ರಹಕೆ ಮೆಟ್ಟಿಲುಗಳಷ್ಟೇ ಅವು-ಒಲಿಯಲು ಸರ್ವಜ್ಞ,
ಯಾವುದೇ ಕರ್ಮಗಳಾದಾಗ -ನೈಜ ಭಕ್ತಿಗೆ ಪೂರಕ,
ಜ್ಞಾನಪೂರ್ವಕ ತಪವಾಗಿ-ಹರಿ ಅನುಗ್ರಹಕ್ಕೆ ತಾರಕ,
ಗೀತೆ ಮಹಾಭಾರತಗಳೆಂದೂ ವೇದಗಳಿಗೇ ಪ್ರೇರಕ,
ಆಚಾರ್ಯರು ಮಥಿಸಿ ಕೊಟ್ಟ ದಿವ್ಯ ಪ್ರಮಾಣವಾಕ್ಯ.

ಶೃಣ್ವೇ ವೀರ ಉಗ್ರಮುಗ್ರಂ ದಮಾಯ - ‘ನ್ನನ್ಯಮನ್ಯಮತಿನೇನೀಯಮಾನಃ ।
ಏದಮಾನದ್ವಿಳುಭಯಸ್ಯ ರಾಜಾ ‘ಚೋಷ್ಕೂಯತೇ ವಿಶ ಇನ್ದ್ರೋ ಮನುಷ್ಯಾನ್ ॥೧.೧೦೦॥

(ಇದು ಋಗ್ವೇದದ ೬ನೇ ಮಂಡಲದ ೪೭ನೆಯ ಸೂಕ್ತದ ೧೬ನೆಯ ಋಕ್  ಇಲ್ಲಿ ಹೇಳುತ್ತಾರೆ:  “ಓ ನರಸಿಂಹನೇ, ನೀನು ಅತ್ಯಂತ ಉಗ್ರರಾಗಿರುವ ರಾಕ್ಷಸರನ್ನು ನಿಗ್ರಹಿಸುತ್ತಾ ಉಳಿದವರನ್ನು ಮೇಲಕ್ಕೆ ಕೊಂಡೊಯ್ಯುತ್ತಾ, ಮನುಷ್ಯರೆಂಬುವವರನ್ನು ಈ ಸಂಸಾರದಲ್ಲಿ ಪರಿವರ್ತನೆ ಮಾಡುತ್ತಾ ಇರುತ್ತೀಯಾ”)

ನಾರಸಿಂಹ ತೋರುವ ಉಗ್ರನಾಟಕದ ಅದ್ಭುತ ವೇಷ,
ಮಾಡುವ-ಜೀವರ ಯೋಗ್ಯತೆಯಂತೆ ಪುಣ್ಯಪಾಪಗಳ ಹ್ರಾಸ,
ಭಗವಂತ ಎಂದೂ ರಾಗ ದ್ವೇಷಗಳಿರದ ತಟಸ್ಥ ತೋಟಗಾರ,
ಏನೇ ಇರಲದು ಮಾವ ಸಿಹಿ ಬೇವ ಕಹಿ ಮೆಣಸಿನದ್ದು ಖಾರ,
ಎಲ್ಲವನ್ನೂ ನೀರೆರೆದು ಪೋಷಿಸಿ ಅವಕ್ಕೆ ಕೊಡುವ ವಿಕಾಸ,
ಜೀವ ಸ್ವಭಾವ ಬದಲಿಸದೇ ತಕ್ಕದ್ದನ್ನೇ ಕೊಡುವ ಸರ್ವೇಶ,
ಅವನೆಂದೆಂದೂ ಅಲ್ಲ ಪಕ್ಷ ಪಾತಿ,
ಇರುವುದ ಕೊಡುವುದೇ ಅವನ ನೀತಿ.


[Contributed by Shri Govind Magal]

No comments:

Post a Comment

ಗೋ-ಕುಲ Go-Kula