Friday 8 December 2017

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 1: 121 -123

ಷಣ್ಣವತ್ಯಙ್ಗುಲೋ ಯಸ್ತು ನ್ಯಗ್ರೋಧಪರಿಮಣ್ಡಲಃ ।
ಸಪ್ತಪಾದಶ್ಚತುರ್ಹಸ್ತೋ ದ್ವಾತ್ರಿಂಶಲ್ಲಕ್ಷಣೈರ್ಯುತಃ ।
ಅಸಂಶಯಃ ಸಂಶಯಚ್ಛಿದ್ ಗುರುರುಕ್ತೋ ಮನೀಷಿಭಿಃ’ ॥೧.೧೨೧॥

ಆಧರಿಸಿ ದೇವತೆಗಳು ಮತ್ತು ಅವರ ಗುಣ,
ನಮಗೆ ಪರಿಚಯಿಸುವುದು ಅವರ ದೇಹಲಕ್ಷಣ,
ಮೂವತ್ತೆರಡು ಲಕ್ಷಣಗಳಿಂದ ಕೂಡಿದ ದೇಹ,
ಮುಖ್ಯವಾಗಿ ತೊಂಬತ್ತಾರು ಅಂಗುಲ ಎತ್ತರದ ಕಾಯ,
ಅಗಲ ಅಥವಾ ವಿಸ್ತಾರವಾದ ಸುತ್ತಳತೆ,
ಚತುರಹಸ್ತ-ಸಪ್ತಪಾದ ಲಕ್ಷಣಗಳ ಹೇಳುವ ದೇವತೆ.

ತೋಳು,ಮೂಗು,ಕೆನ್ನೆ,ಕಣ್ಣು ಮತ್ತು ಎದೆ,
ಉಬ್ಬಿದ್ದು ದೀರ್ಘವಾಗಿರಬೇಕು ಎಂದ್ಹೇಳಿದೆ,
ಬೆರಳುಗಳ ಮಧ್ಯದ ಜಾಗ,ಬೆರಳುಗಳು,ಚರ್ಮ,ಕೂದಲು,ದಂತ,
ಹೇಳಿದೆ ಇವು ಐದೂ ಸೂಕ್ಷ್ಮವಾಗಿ ಇರಬೇಕಂತ,
ಕೈಯ ಕೆಳಗಿನ ಭಾಗ,ಕಾಲ ಕೆಳಗಿನ ಭಾಗ,ತುಟಿ,ನಾಲಿಗೆ,
ಕಣ್ಣಿನ ತುದಿ,ಉಗುರು,ಅಂಗುಳು,ಇವು ಏಳಿರಬೇಕಂತೆ ಕೆಂಪಗೆ,
ಕತ್ತು -ತೊಡೆ ಮತ್ತು ಪೃಷ್ಠಭಾಗ ಇವು ಮೂರು,
ಲಘುವಾಗಿ ದೇಹಕ್ಕೆ ತಕ್ಕನಾಗಿರುವಂತೆ ತೋರು,
ಮನಸ್ಸು -ನಾದ -(ನಾಭಿ)ಹೊಕ್ಕಳು,
ಈ ಮೂರು ಗಂಭೀರ ಆಳವಾದ ತಾಣಗಳು.

ಈ ಮೂವತ್ತೆರಡು ಲಕ್ಷಣಗಳ ಹೊಂದಿರುವಾತ,
ಆಗಿರಬೇಕು ಎಂದೂ ಸಂಶಯಗಳಿರದಾತ,
ಆತನಾಗಿರಬೇಕು ಯಾವಾಗಲೂ ಸಂಶಯನಾಶಕ,
ಗುರು ಎಂದು ಆತ ಕರೆಯಲ್ಪಡುತ್ತಾನೆ ಗೌರವಪೂರ್ವಕ.

ತಸ್ಮಾದ್ ಬ್ರಹ್ಮಾ ಗುರುರ್ಮುಖ್ಯಃ ಸರ್ವೇಷಾಮೇವ ಸರ್ವದಾ ।
ಅನ್ಯೇsಪಿ ಸ್ವಾತ್ಮನೋ ಮುಖ್ಯಾಃ ಕ್ರಮಾದ್ ಗುರವ ಈರಿತಾಃ ॥೧.೧೨೨॥

ದೇವಸಂಸಾರದಲ್ಲಿ ಚತುರ್ಮುಖ ಮತ್ತು ಮುಖ್ಯಪ್ರಾಣ,
ಹೊಂದೇ ಇದ್ದಾರೆ ತಪ್ಪದೇ ಎಲ್ಲಾ ಮೂವತ್ತೆರಡು ಸಲ್ಲಕ್ಷಣ,
ಜೀವರಾಶಿಯ ಅತ್ಯುನ್ನತ ಜೀವರುಗಳು,
ಹೀಗಾಗಿ ಇವರೇ ಮುಖ್ಯವಾದ ಗುರುಗಳು.

ನಂತರ ಬರುವವರಿಗೆ ಕೆಲವು ಲಕ್ಷಣ,
ಹಾಗೇ ಜೊತೆಗೆ ಕೆಲವು ದುರ್ಲಕ್ಷಣ,
ಒಟ್ಟಿನಲ್ಲಿ ಅಂಗಾಂಗಗಳಿರಬೇಕು ಪ್ರಮಾಣಬದ್ಧ,
ಆಗಮಾತ್ರ ಅದು ಲಕ್ಷಣ ಗುಣವೆಂದದು ಸಿದ್ಧ.

ಇದನ್ನೇ ಮಾಡುತ್ತಾ ಹೋದರೆ ವಿಸ್ತಾರಣ,
ಬ್ರಹ್ಮ ಸರಸ್ವತಿಯರಿಗೆ ಮೂವತ್ತೆರಡು ಲಕ್ಷಣ,
ಸದಾಶಿವಗೆ ಇಪ್ಪತ್ತೆಂಟು ಲಕ್ಷಣ,
ಇಂದ್ರಗೆ ನಾಕು ಕಮ್ಮಿ ಇಪ್ಪತ್ನಾಕು ಲಕ್ಷಣ,
ಹಾಗೇ ಸಾಗಿಳಿದ ಒಂದು ಹಂತ -ಹದಿನಾರು ಲಕ್ಷಣ,
ಅಲ್ಲಿಯವರೆಗೆ ಅಂತ ಹೇಳುತ್ತಾರೆ -ದೇವತಾ ಗಣ,
ವೇದ ಕಂಡ ಋಷಿಗಳಿಗೆ ಕನಿಷ್ಟ ಎಂಟು ಲಕ್ಷಣ,
ದೇವತೆಗಳಲ್ಲೂ ಕಂಡೀತು ಒಮ್ಮೊಮ್ಮೆ ಅಪೂರ್ಣ ಲಕ್ಷಣ.

ನಾರಾಯಣ ಶ್ರೀಲಕ್ಷ್ಮೀ ಹಾಗೂ ಮುಖ್ಯಪ್ರಾಣ,
ಮೂವರಿಗೂ ಇದೆ ಮೂವತ್ತೆರಡು ಲಕ್ಷಣಗಳ ತೋರಣ,
ಮೂರೂ ತೋರಣಗಳೂ ಅಲ್ಲ ಸಮ,
ಇದ್ದೇ ಇರುತ್ತದೆ ಸ್ಫುಟತ್ವದ ತಾರತಮ್ಯ,
ಎಲ್ಲೆಲ್ಲಿ ಕಾಣುತ್ತಿದೆಯೋ ಲಕ್ಷಣಗಳ ಸ್ಫುಟತ್ವ,
ಅಲ್ಲೆಲ್ಲಾ ಬರಬೇಕು ಗುಣಚಿಂತನಾ ಮಹತ್ವ.

ಕ್ರಮಾಲ್ಲಕ್ಷಣಹೀನಾಶ್ಚ ಲಕ್ಷಣಾಲಕ್ಷಣೈಃ ಸಮಾಃ ।
ಮಾನುಷಾ ಮಧ್ಯಮಾ ಸಮ್ಯಗ್ ದುರ್ಲಕ್ಷಣಯುತಃ ಕಲಿಃ ॥೧.೧೨೩

ಲಕ್ಷಣ ಇಲ್ಲದವರದು -ಕೆಳಗಿನ ಸ್ಥಾನ,
ಲಕ್ಷಣ ಅವಲಕ್ಷಣ ಎರಡಿದ್ದವರಿಗೆ ಎತ್ತರದ ಮಾನ,
ಸಜ್ಜನ ಮನುಷ್ಯರದು ಮಧ್ಯಮ,
ದೈತ್ಯರೆಲ್ಲರದೂ ದುರ್ಲಕ್ಷಣದ ಧಾಮ,
ಕಲಿಯೆಂಬ ರಾಕ್ಷಸರ ಮಹಾರಾಜ,

ಖಾಲಿಯಾಗದ ದುರ್ಗುಣಗಳ ಕಣಜ.
[Contributed by Shri Govind Magal]

No comments:

Post a Comment

ಗೋ-ಕುಲ Go-Kula