Sunday 22 October 2017

Bhava Spandana - 27

ಭಾವ ಸ್ಪಂದನ by “ತ್ರಿವೇಣಿ ತನಯ
ಅಂದು -ಇಂದು

ಅಪ್ಪ ಅಮ್ಮನ ಒಂದು ತೀಕ್ಷ್ಣ ನೋಟ,
ನಿಲ್ಲಿಸುತ್ತಿತ್ತು ನಮ್ಮ ತರ್ಲೆ ಚೇಷ್ಟೆ ಆಟ,
ಬಾಯಿಯೇ ಬಿಡದ ಒಂದು ಕಣ್ಣ ಸನ್ನೆ,
ನಡವಳಿಕೆಯ ರಥ ತಿರುಗಿಸುವ "ಸನ್ನೆ ".

ಮೌನ ನೋಟ -ತಿಳಿಸೋ ಪಾಠ

ಎಲ್ಲಿದೆ ಇಂದು ಮೌನ -ನೋಟಕೆ ಬೆಲೆ?
ಸತ್ತೇಹೋಗಿದೆ ಅರ್ಥಮಾಡ್ಕೊಳ್ಳೋ ಕಲೆ!
ಚಂದವಲ್ಲವೇ ಸೂಕ್ಷ್ಮ ಗ್ರಹಿಕೆ -ಸ್ಪಂದನ?
ನವನಾಗರೀಕತೆ ಕೊಂದಿದೆ ಸಂವಹನ!

ದೇವಯಾಗ -ಜೀವನ ಯೋಗ

ದೇವರ ಪೂಜೆಯೆಂದರೆ ದೇವರ ಕೋಣೆಯಲ್ಲಲ್ಲ,
ಅನುದಿನ ಕ್ಷಣದ ವ್ಯಾಪಾರ ಅವನದೇ ಎಲ್ಲ,
ಆ ಸ್ಮರಣೆ ಬರುತಿರಲು ಅಹಂ ಮಮ ನಾಶ,
ಅನುಭವಕ್ಕೆ ಬಂದಾನು ಮುಂದೊಮ್ಮೆ ಈಶ.

ಪ್ರತಿ ಆಟ -ಜೀವಕ್ಕೆ ಪಾಠ

ಪ್ರತಿ ಘಟನೆ ಪ್ರತಿ ತಿರುವು ಪ್ರತಿಯೊಂದು ಆಟ,
ದೇವ ನಿಂತು ಜೀವದುದ್ಧಾರಕ್ಕೆ ಕೊಡುವ ಪಾಠ,
ಏನೇ ಮಾಡಲು ಯಾವ ಜೀವ ಸ್ವತಂತ್ರ ಹೇಳು?
ನೀನು ಕಟ್ಟಿ ತಂದದ್ದೇ ಉಣಿಸುವ ಅವ ಕೇಳು!

ಗೊತ್ತೆಂಬ ಮತ್ತು -ತರುವುದಾಪತ್ತು

ಯಾರಿಗೇನೇ ಹೇಳು -ನನಗೆಲ್ಲಾ ಗೊತ್ತು,
ಜ್ಞಾನಿಗಳನ್ನೂ ಮೀರಿಸುವ ಭಾರೀ ಗತ್ತು,
ಸ್ವಂತ ಬುದ್ಧಿಯದು ಇಲ್ಲವೇ ಇಲ್ಲ,
ಇನ್ನೊಬ್ಬರ ಮಾತು ಕೇಳೋದೇ ಇಲ್ಲ.
[Contributed by Shri Govind Magal]

No comments:

Post a Comment

ಗೋ-ಕುಲ Go-Kula