Wednesday 18 October 2017

Bhava Spandana - 26

ಭಾವ ಸ್ಪಂದನ by “ತ್ರಿವೇಣಿ ತನಯ

ನಿತ್ಯಾನುಸಂಧಾನ

ವ್ಯವಹರಿಸೋ ಪ್ರತಿವ್ಯಕ್ತಿಯಲಿ ದೈವಶಕ್ತಿಯ ಕಾಣು,
ಎಲ್ಲಜೀವ ಜಡಗಳಂತೆ ನೀನೂ ಒಂದು ಅಸ್ವತಂತ್ರ ಅಣು,
ನೆನಪಿರಲಿ ಬದುಕಿನ ಎಲ್ಲಾ ನಡೆಗಳು ಪೂರ್ವನಿಯೋಜಿತ,
ಶಾರಣ್ಯದ ನಿರ್ಲಿಪ್ತ ಭಕ್ತಿ ಹರಿದಿರಲದು ಅಬಾಧಿತ.

ಪ್ರಶ್ನೆ ಉತ್ತರ -ಅವನ ಬಿತ್ತರ

ಕೊನೆತನಕ ಪ್ರಶ್ನೆಯಾಗುಳಿವವ ಭಗವಂತ,
ಪ್ರಶ್ನೆಯಾಗಿದ್ದೇ ಉತ್ತರ ಕರುಣಿಸುವ ಅನವರತ,
ಪ್ರಶ್ನೆಯೋ ಉತ್ತರವೋ ಹುಡುಕುವವರಿಗೆ ಲಭ್ಯ,
ಕರೆಯದಲೆ ಬರುವವನಲ್ಲ ಅವ ಭಾರೀ ಸಭ್ಯ!

ಹೊರಗೆ ಕಾಣ -ಒಳಗಿಹ ಜಾಣ

ಬಂದರೂ ಹೊರಗಣ್ಣಿಗೆಂದೂ ಕಾಣ,
ಗೋಚರ ಅನುಭವದ ಚಾಳೀಸಿಗೆ ಜಾಣ,
ಬಗೆಬಗೆಯ ವೇಷ ತೊಡುವ ಮಾಯಗಾ ,
ಮಣ್ಣಿಗೆ ತಕ್ಕಂಥ ಬೊಂಬೆ ಮಾಡುವ ಕುಂಬಾರ.

ಮಡಿ ಮೈಲಿಗೆ -ದೂರಾದ ಸಲಿಗ

ಅರ್ಥವಿರದ ಆಚಾರ ಮಡಿ ಮೈಲಿಗೆ,
ದೂರವಾಗಿದೆ ಮಾನವತ್ವದ ಸಲಿಗೆ,
ಮೈಲಿಗೆಯಾಗುವುದು ಮೈಯಲ್ಲ ಮನ,
ಸ್ವಚ್ಛವಿಡು ಮನ -ಅದು ದೇವಉದ್ಯಾನ.

ಸ್ಥಾನ ಮಾನ -ನೈತಿಕತೆಯ ಅವಸಾನ

ಎಲ್ಲಿ ಹೋಯ್ತು ಪ್ರೀತಿ ವಿಶ್ವಾಸ ಸಂಬಂಧ?
ಮಾಪನ ಯಾವುದದು ಅಳೆಯಲು ಅನುಬಂಧ?
ಮಡಿ ಮೈಲಿಗೆಗೆ ಸಾಮಾಜಿಕ ಸ್ಥಾನ ಮಾನ?
ನಾಟಕದಲ್ಲೇ ಆಗುತಿದೆ ಮಾನವತ್ವದ ಅವಸಾನ!


[Contributed by Shri Govind Magal]

No comments:

Post a Comment

ಗೋ-ಕುಲ Go-Kula