Tuesday 3 October 2017

Bhava Spandana - 21


ಭಾವ ಸ್ಪಂದನ by “ತ್ರಿವೇಣಿ ತನಯ

ಅಜ್ಞಾನದ ಬೇಲಿ -ತಲೆ ಖಾಲಿ

ಜ್ಞಾನಿ -ಸಂತರಿಗೂ ಮಠ ಮಠದ ಬೇಲಿ,
ಮಾನವತ್ವದ ನೆಲೆಯಲಿ ಎಲ್ಲ ತಲೆ ಖಾಲಿ,
ವಿವಿಧತೆಯಲಿ ಏಕತೆಯಿರದ ಅದೆಂಥಾ ಭಕ್ತಿ?
ಕೀಳು ಭೇದ ಭಾವಗಳ ಒಪ್ಪೀತೇ ಪರಶಕ್ತಿ?

ಹಣಕ್ಕಿಲ್ಲ ಬೆಲೆ -ಕಂಡುಕೋ ನೆಲೆ

ಎಲ್ಲಿ ನೋಡಿದರೂ ಹಣ ಮಾಡುವ ಗೀಳು,
ಹೆಣವಾಗುವವರೆಗೂ ಹಣಕ್ಕೇ ದುಡಿವ ಬಾಳು,
ಪರಲೋಕದಲ್ಲಿ ನಿನ್ನ ಹಣಕ್ಕಿಲ್ಲ ಕವಡೆಯ ಬೆಲೆ,
ತತ್ವಜ್ಞಾನದ ಹಿಂದೆ ಬಿದ್ದು ಕಂಡುಕೋ ನಿನ್ನ ನೆಲೆ.

ಬೆಂಬಿಡದ ಶಾಖ -ಮನವಾಗಲಿ ಪಾಕ

ತಾಯ ಗರ್ಭದಿ ಭರಿಸಲಾಗದ ಶಾಖ,
ಭೂಮಿಯಲಿ ಪ್ರೇಮ ಕಾಮದ ಶಾಖ,
ಜೀವನದಿ ಬಾಳ-ಕುಲುಮೆಯ ಶಾಖ,
ಕೊನೆಗೆ ನೀ ಬಿಟ್ಟ ದೇಹಕ್ಕೆ ಚಿತೆಯ ಶಾಖ.

ಸಹಿಸದ ದೇಹ -ವಿಚಿತ್ರ ಸ್ವಭಾವ

ಚಳಿಗೆ ತಡೆಯದ ದೇಹ ಮಳೆಗೆ ತಡೆಯದ ದೇಹ,
ಬಿಸಿಲ ತಡೆಯದ ದೇಹ ಮಣ್ಣಿಗೊಗ್ಗದ ದೇಹ,
ಗಾಳಿ ತಡೆಯದ ದೇಹ ಧೂಳು ತಡೆಯದ ದೇಹ,
ಆಕಾಶದೊಳಿದ್ದರೂ ಸದವಕಾಶ ಪಡೆಯದ ದೇಹ,
ಪಂಚ ಭೂತಗಳಿಂದಾದದ್ದೇ ಈ ದೇಹ,
ಪಂಚ ಭೂತಗಳಲ್ಲೇ ಲೀನವಾಗುವ ದೇಹ.

ಜಾಡು -ಪಾಡು -ಬೀಡು

ವಿಚಿತ್ರವೆನಿಸಿದರೂ ಸತ್ಯವಿದು ನೋಡು,
ಒಬ್ಬೊಬ್ಬರದೂ ಒಂದೊಂದು ಬೇರೆ ಜಾಡು,
ಅವರವರ ಮನಶ್ರುತಿಯಂತೆ ಅವರ ಹಾಡು,
ಅದರಂತೇ ಪಾಡು-ಸೇರುವರವರವರ ಬೀಡು.
[Contributed by Shri Govind Magal]

No comments:

Post a Comment

ಗೋ-ಕುಲ Go-Kula