Monday 23 October 2017

Balipadyami: Vamana Avatara ಬಲಿಪಾಡ್ಯಮೀ: ವಾಮನ ಅವತಾರ

ಬಲಿಪಾಡ್ಯಮೀ: ವಾಮನ ಅವತಾರ

ಭಗವಂತನ ಹತ್ತು ಅವತಾರಗಳಲ್ಲಿ ಎರಡು ಅವತಾರಗಳು ಒಂದೇ ವಂಶದ ಇಬ್ಬರು ಮಹಾನ್ ವ್ಯಕ್ತಿಗಳನ್ನು ಉದ್ಧರಿಸಿದ ಅವತಾರಗಳು... ಒಂದು ನರಸಿಂಹ ಮತ್ತೊಂದು ವಾಮನ... ಭಕ್ತ ಪ್ರಹ್ಲಾದನನ ಭಕ್ತಿಯ ಕರೆಗೆ ಓಗೊಟ್ಟ ರೂಪ ನರಸಿಂಹಾವತಾರವಾದರೆ ಅವನ ಮೊಮ್ಮಗ ಬಲಿಯನ್ನು ಉದ್ಧರಿಸಿದ ರೂಪ ವಾಮನಾವತಾರ...

ಇದರ ವಿಶೇಷತೆಯನ್ನು ನಾವು ನಿತ್ಯ ಸಂಧ್ಯಾವಂದನೆಯಲ್ಲಿ ಜಪಿಸುವ ಗಾಯತ್ರೀ ಮಂತ್ರದಿಂದ ಕೂಡ ತಿಳಿಯಬಹುದಾಗಿದೆ...

ವಿಶ್ವಾಮಿತ್ರ ಗಾಯತ್ರಿ ಮಂತ್ರದಲ್ಲಿ ಒಟ್ಟು ಹತ್ತು ಶಬ್ದಗಳಿವೆ... ಅಲ್ಲಿ ಹತ್ತು ಶಬ್ದಗಳೇ ಯಾಕಿವೆ ?... ಯಾಕಿವೆಯಂದರೆ ಇವು  ಸ್ಪಷ್ಟವಾಗಿ ಭಗವಂತನ ದಶಾವತಾರಗಳನ್ನು ಹೇಳುವ ಶಬ್ದಗಳಾಗಿವೆ. ಅದು ವಿಶೇಷ..

ಗಾಯತ್ರಿ ಮಂತ್ರದ ಆ ಹತ್ತು ಶಬ್ದಗಳು : ತತ್, ಸವಿತುಃ, ವರೇಣ್ಯಂ, ಭರ್ಗಃ, ದೇವಸ್ಯ. ಧೀಮಹಿ, ಧಿಯಃ, ಯಃ, ನಃ, ಪ್ರಚೋದಯಾತ್...

ತತ್ : ಮತ್ಸ್ಯಾವತಾರ
ಸವಿತುಃ : ಕೂರ್ಮಾವತಾರ
ವರೇಣ್ಯಂ : ವರಾಹಾವತಾರ
ಭರ್ಗಃ : ನರಸಿಂಹಾವತಾರ
ದೇವಸ್ಯ : ವಾಮನಾವತಾರ
ಧೀಮಹಿ : ಪರಶುರಾಮಾವತಾರ
ಧಿಯಃ : ರಾಮಾವತಾರ
ಯಃ : ಕೃಷ್ಣಾವತಾರ
ನಃ : ಬುದ್ಧಾವತಾರ
ಪ್ರಚೋದಯಾತ್ : ಕಲ್ಕ್ಯಾವತಾರ

ಈಗ ಗಾಯತ್ರಿಗೆ ಸಂಬಂಧಪಟ್ಟ ವಿಷಯ ಹೀಗಿದೆ :  ಗಾಯತ್ರಿ ಮಂತ್ರ ಅಂದರೆ ಮೂರ ಪಾದದ, ಒಂದೊಂದು ಪಾದದಲ್ಲೂ ಎಂಟೆಂಟು ಅಕ್ಷರಗಳಿರುವ ಗ್ರಾಯತ್ರೀ ಛಂದಸ್ಸಿನ ಒಂದು ಮಂತ್ರ...

ಯಾವುದೇ ಮಂತ್ರವಾಗಲಿ ಉಪಾಸನೆಯಲ್ಲಿ ನಾವು ಮೊದಲು ನೆನೆಯಬೇಕಾದದ್ದು, ಋಷಿ-ಛಂದಸ್ಸು-ದೇವತೆಯನ್ನು... ಅಂದರೆ ಆ ಮಂತ್ರವನ್ನು ಕಂಡ ಋಷಿ ಯಾರು ? ಆ ಮಂತ್ರ ಯಾವ ಛಂದಸ್ಸಿನಲ್ಲಿದೆ ? ಮತ್ತು ಆ ಮಂತ್ರ ಪ್ರತಿಪಾದ್ಯವಾದ ದೇವತೆ ಯಾರು ? ಯಾವುದೇ ಮಂತ್ರ ಪಠಿಸುವ ಮೊದಲು ಈ ಮೂರನ್ನು ನೆನಪಿಸಿಕೊಂಡ ಮೇಲೆಯೇ ಮಂತ್ರಜಪ...

ಸದ್ಯ ನಾವು ನಿತ್ಯ ಜಪಿಸುವ ಗಾಯತ್ರಿ ಮಂತ್ರವನ್ನು ಕಂಡ ಋಷಿ : ವಿಶ್ವಾಮಿತ್ರ ; ಛಂದಸ್ಸು: ಗಾಯತ್ರೀ; ದೇವತೆ : ಸೂರ್ಯನ ಅಂತರ್ಗತವಾದ ನಾರಾಯಣ ರೂಪ.. ಅದೇ ಸವಿತೃನಾರಾಯಣ ಅಥವಾ ಸೂರ್ಯನಾರಾಯಣ ರೂಪ...

ಯಾವುದೇ ಮಂತ್ರಕ್ಕೆ ಹೆಸರು ಬರುವುದು ಇದೇ ಮೂರು ಕಾರಣಗಳಿಂದ... ಮಂತ್ರವನ್ನು ಕಂಡ ಋಷಿಯಿಂದ ಅಥವಾ ಮಂತ್ರದ ಛಂದಸ್ಸಿನಿಂದ ಅಥವಾ ಆ ಮಂತ್ರ ಪ್ರತಿಪಾದ್ಯ ದೇವತೆಯಿಂದ...

ಎಂಟೆಂಟು ಅಕ್ಷರದ ಮೂರು ಪಾದಗಳುಳ್ಳ ಎಲ್ಲ ಮಂತ್ರಗಳೂ ಗಾಯತ್ರೀ ಮಂತ್ರಗಳೇ ಆದರೂ ವಿಶ್ವಾಮಿತ್ರ ಗಾಯತ್ರಿ ಮಾತ್ರ ಗಾಯತ್ರೀ ಮಂತ್ರ ಎಂದು ಕರೆಯಲ್ಪಡುವುದಕ್ಕೆ ಮುಖ್ಯ ಕಾರಣ ಈ ಮಂತ್ರಕ್ಕಿರುವ ವೈಶಿಷ್ಟ್ಯ ಹಾಗೂ "ಛಂದಸ್ಸಿ"ನಿಂದಲೇ ಗುರುತಿಸಲ್ಪಟ್ಟ ಮಂತ್ರ ಇದಾದದ್ದರಿಂದ...

ಈ ಗಾಯತ್ರಿಗೂ ಇಂದು ನಾವು ಬಲಿಪಾಡ್ಯಮೀ ದಿನದಂದು ನೆನೆಯುವ ವಾಮನ ರೂಪಕ್ಕೂ ಒಂದು ವಿಶೇಷವಾದ ಸಂಬಂಧ ಇದೆ... ಗಾಯತ್ರೀ ಮಂತ್ರದಲ್ಲಿ ಒಟ್ಟು ಇಪ್ಪತ್ತನಾಲ್ಕು ಅಕ್ಷರಗಳಿವೆ ಅಂತಾರೆ... ಆದರೆ ಎಣಿಸಿ ನೋಡಿ ! ಇರುವುದು ಇಪ್ಪತ್ತಮೂರೇ ಅಕ್ಷರಗಳು...

ತತ್ ಸವಿತುರ್ವರೇಣ್ಯಂ |
ಭರ್ಗೋದೇವಸ್ಯ ಧೀಮಹಿ |
ಧಿಯೋಯೋನಃ ಪ್ರಚೋದಯಾತ್ ||

7+8+8 = 23 (ತ್ - ಅರ್ಧ ಮಾತ್ರೆ ಅದನ್ನು ಪರಿಗಣಿಸುವಂತಿಲ್ಲ;
ಸಂಸ್ಕೃತ ಭಾಷೆಯಲ್ಲಿ ವರ್ಣಗಳನ್ನು ಅಂದರೆ ಅಕ್ಷರಗಳನ್ನು "ಮಾತ್ರೆಗಳು" ಅಂತ ಕರೆಯುತ್ತಾರೆ)...

ಮೊದಲ ಸಾಲು ಎಂಟಕ್ಷರ ಆಗಬೇಕೆಂದರೆ "ವರೇಣ್ಯಂ" ಶಬ್ದವನ್ನು ಜಪದಲ್ಲಿ ಬಿಡಿಸಿ ಉಚ್ಚರಿಸಬೇಕು "ವರೇಣಿಯಂ" ಅಂತ...
ಇದನ್ನು ಯಾಕೆ ಬಿಡಿಸಬೇಕು ? ಅದಕ್ಕೂ ಕಾರಣ ಉಂಟು...

ಯಾವುದೇ ವೇದ ಮಂತ್ರ ಕೂಡ ಅದು ನಿರ್ಮಾಣಗೊಂಡ ಒಂದೊಂದು ಅಕ್ಷರದಲ್ಲೂ ಒಂದೊಂದು ವಿಶೇಷತೆ ಅಡಗಿರುತ್ತದೆ... ಅದರಿಂದಲೇ ವೇದ ಮಂತ್ರಗಳನ್ನು ಜ್ಞಾನರಾಶಿಗಳು ಅಂತ ಕರೆದದ್ದು... "ವೇದ" means Knowledge.... ಋಗ್ವೇದದಲ್ಲಿ ಒಟ್ಟಾರೆ ಹತ್ತುಸಾವಿರ ಮಂತ್ರಗಳಿವೆ ಮತ್ತು ಒಟ್ಟು 4,32,000 ಅಕ್ಷರಗಳಿವೆ... ಇಷ್ಟು ಅಕ್ಷರಗಳಿಗೂ ಭಗವಂತನ ಒಂದೊಂದು ರೂಪಗಳಿವೆ.. ಅದರಿಂದ ಒಂದೊಂದು ಅಕ್ಷರಕ್ಕೂ ಆಳವಾದ ಅರ್ಥಗಳಿವೆ...

ಹಾಗೆಯೇ, ಗಾಯತ್ರೀ ಮಂತ್ರದಲ್ಲಿರುವ ಒಂದೊಂದು ಅಕ್ಷರವೂ ಕೂಡ ಭಗವಂತನ ಒಂದೊಂದು ರೂಪವನ್ನು ಹೇಳುತ್ತದೆ... ಯಾವುವು ಭಗವಂತನ ಆ ರೂಪಗಳು ? ಅವು ನಾವು ಆಚಮನ ಮಂತ್ರದಲ್ಲಿ ಹೇಳುವ
ಕೇಶವಾದಿ ಚತುರ್ವಿಂಶತಿ (24) ರೂಪಗಳು...

ತ(ತ್)- ಕೇಶವ; ಸ-ನಾರಾಯಣ; ವಿ-ಮಾಧವ; ತು-ಗೋವಿಂದ; ವ-ವಿಷ್ಣು ; ರೇ- ಮಧುಸೂದನ ; ಣ್ಯಂ-ತ್ರಿವಿಕ್ರಮ... ಈಗ ಸಿಕ್ಕಿತು ನೋಡಿ ವಾಮನಾವತಾರದ ಅರ್ಥ.. "ಣ್ಯಂ" ಅಕ್ಷರವನ್ನು "ಣಿಯಂ" ಎಂದು ಎರಡು ಅಕ್ಷರವಾಗಿ ಬಿಡಿಸಿಕೊಂಡರೆ "ಣಿ-ತ್ರಿವಿಕ್ರಮ; ಯಂ-ವಾಮನ" ಎಂಬ ಎರಡು ಭಗವಂತನ ರೂಪಗಳನ್ನು ಹೇಳುವ ಅಕ್ಷರಗಳಾಗುತ್ತವೆ...

ಎಂಥಾ ಅದ್ಭುತ ನೋಡಿ ! ತ್ರಿವಿಕ್ರಮ ಅಂತ ಭಗವಂತನ ಬೇರೊಂದು ರೂಪವಿಲ್ಲ...‌ ವಾಮನನೇ ಬೆಳೆದು ತ್ರಿವಿಕ್ರಮನಾದದ್ದು...‌ ಅದರಿಂದ "ಣ್ಯಂ" ಅಕ್ಷರವನ್ನು ಬಿಡಿಸಿಕೊಂಡು "ಣಿಯಂ" ಅಂತ ಎರಡು ಅಕ್ಷರ ಮಾಡಿಕೊಂಡಾಗ ಗಾಯತ್ರೀ ಮಂತ್ರದ ಮೂರು ಪಾದದಲ್ಲೂ 8+8+8= 24 ಅಕ್ಷರಗಳಾಗುತ್ತವೆ... ಈಗ ಇದು Perfect ಆಗಿ 24 ಅಕ್ಷರಗಳ ಗಾಯತ್ರೀ ಮಂತ್ರವಾಯಿತು... ಅದರಿಂದ ಜಪದಲ್ಲಿ ನಮ್ಮ ಮಂತ್ರೋಚ್ಚಾರ "ತತ್ ಸವಿತುರ್ವರೇಣಿಯಂ" ಅಂತ ಆಗಬೇಕು... ಅದು ಏಕೆ ಎಂಬುದೂ ಕೂಡ ಈಗ ಅರ್ಥವಾಯಿತು...
ಇದನ್ನೆಲ್ಲ ಹೀಗೆ ತಿಳಿಸಿಕೊಟ್ಟವರು ನಮ್ಮ ಪೂಜ್ಯ ಆಚಾರ್ಯರು... ಇದು ನಿಮ್ಮೆಲ್ಲರಿಗೂ ತಿಳಿದ ವಿಷಯವೇ ಆಗಿದೆ..‌‌. ಆದರೂ ಬಲಿಪಾಡ್ಯಮೀ ದಿನದ ವಿಶೇಷವಾಗಿ ಮೆಲುಕುಹಾಕುವುದಕ್ಕಷ್ಟೇ ಈ ಪ್ರಯತ್ನ ... ನಮಸ್ಕಾರ.
- By B S Harish

No comments:

Post a Comment

ಗೋ-ಕುಲ Go-Kula