Sunday 20 August 2017

Bhava Spandana - 4

ಭಾವ ಸ್ಪಂದನ by “ತ್ರಿವೇಣಿ ತನಯ
ಆವರಣ -ಹೂರಣ

ಪ್ರತಿ ಶಬ್ಧ ಪದ್ಯ ಪುರಾಣ ಇತಿಹಾಸ,
ಅವರವರ ಭಾವಕ್ಕೆ ತೆರೆದುಕೊಳ್ಳೋ ಕೋಶ,
ನಾವು ಗಮನಿಸೋದು ಬರೀ ಹೊರ ಆವರಣ,
ಕಾಣಬಲ್ಲೆವೇ ನಾವು ಅಂತರಂಗದ ಹೂರಣ.

ವೇದ ಉಪನಿಷತ್ತು-ನೈಜ ತಾಕತ್ತು

ಬೇಕೋ ವೇದ ನಾಕು,
ಹತ್ತಕ್ಕೆ -ಏಣಿ ಹಾಕು,
ತಿಳಿ ಹತ್ತು ಉಪನಿಷತ್ತು,
ನಾಕನೇ ಲೋಕಕ್ಕೆ ಹತ್ತು,
ಗಳಿಸಿಕೋ ಬೇಕಾದ ತಾಕತ್ತು,
ಇದೇ ತತ್ವವಾದದ ಗಮ್ಮತ್ತು.

ಬೇಕಿಲ್ಲ ಬಹುಮತ-ಸದ್ಭಾವ ಸಮ್ಮತ

ಮೇರು ಧ್ಯೇಯದ ಕಿರುಸೈನ್ಯ ಗೆಲ್ಲುವುದು ಯುದ್ಧ,
ಪ್ರಾಮಾಣಿಕ ಸಾಧನೆಯು ಸ್ವರ್ಗಾದಿಗಳಿಗೆ ಬದ್ಧ,
ಆಚರಣೆ ಎಂತೇ ಇರಲಿ ಭಾವವದು ಪ್ರಧಾನ,
ಅನಪೇಕ್ಷಿತ ದೈವಾರಾಧನೆಯೇ ಮುಕ್ತಿಗೆ ಸೋಪಾನ.

ಬೇಡ ಜಾತ್ರೆ -ಇದ್ದಲ್ಲೇ ಯಾತ್ರೆ

ವ್ಯಾಕುಲ ಬಿಟ್ಟಿರುವುದೇ ಗೋಕುಲ,
ಚತುರನಾಗಿ ಇರುವುದದೇ ಮಥುರ,
ಪರಿ ಪರಿ ಚಿಂತೆಯ ಬಿಡಲದೇ ಬದರಿ,
ಈ ಪರಿ ಮನವಿತ್ತು ಕಳೆ ಭವದ ಉರಿ.

ಅಂತಃಸತ್ವ -ಮೂಲ ತತ್ವ

ಭಗವಂತಾ ನೀ ಎಲ್ಲಿ ಇಲ್ಲದಿಲ್ಲ,
ಬಲ್ಲವರಿಗೆ ನೀನೇ ಎಲ್ಲರ ಮಲ್ಲ,
ಮತ್ತೆ ಕೆಲವರಿಗೆ ನೀನಾದೆ ಅಲ್ಲಾ ,
ವ್ಯಾಸನಾಗಿ ಬಂದ ನಿನ್ನ ಮೂಲ- ಬೆಸ್ತ,
ನಂತರದ ಕೆಲ ವರ್ಗಕ್ಕಾದೆ -ಏಸುಕ್ರಿಸ್ತ,
ಚೆಂದ ಮನವಿರೆ ಸ್ವಸ್ಥ-ಇರದಿರೆ ಅಸ್ತವ್ಯಸ್ತ.

No comments:

Post a Comment

ಗೋ-ಕುಲ Go-Kula