Sunday 31 January 2016

Bhava Guccha 13

ಭಾವ ಗುಚ್ಛ by “ತ್ರಿವೇಣಿ ತನಯ”

ರಾಯರ ಎತ್ತರ -ನಾವೆಷ್ಟು ಹತ್ತಿರ?

ನಮೋ ಯತಿಕುಲತಿಲಕ ಶ್ರೀ ರಾಘವೇಂದ್ರ,
ನಿಮ್ಮ ಹೆಸರಲಿ ಮಠಗಳಾಗಿವೆ ಬರೀ ವ್ಯಾಪಾರ ಕೇಂದ್ರ,
ಬೇಕಿಲ್ಲ ನಿಮಗೆ ರಜತ-ಸುವರ್ಣ ತೇರುಗಳಲಿ ಮೆರವಣಿಗೆ,
ನಿಮ್ಮ ಗ್ರಂಥಗಳ ಕಲಿತು ತರುವುದಾಗುತ್ತ ಲೇ ಇಲ್ಲ ಆಚರಣೆಗೆ.

ರಾಯರ -ನಮ್ಮ ವೈರಾಗ್ಯ

ನಿಮಗಿರಲಿಲ್ಲವೇ ನಿಮ್ಮ ದಾರಿದ್ರ್ಯ ನಿವಾರಣೆಯ ಶಕ್ತಿ!
ನಗುತಲೇ ನೀಗಿಕೊಂಡಿರಿ ಮಾಡುತಾ ಪ್ರಾರಬ್ಧಗಳ ಭುಕ್ತಿ,
ಮಠಗಳಾಗಿವೆ ಇಂದು ಧನ ಕನಕಗಳ ಭಂಡಾರ,
ಆಗುತ್ತಿಲ್ಲ ನೀವಿತ್ತ ನಿಜಸಂಪತ್ತಿನ ಸಾಕ್ಷಾತ್ಕಾರ .

ರಾಯರ ಕರುಣೆ -ನಮ್ಮ ಸ್ಮರಣೆ

ಏನೆಂದು ಕೊಂಡಾಡಲೀ ಶ್ರೀ ರಾಯರ ಮಹಿಮೆ,
ಕೊಡುವುದೆಲ್ಲವ ಕೊಟ್ಟು ಹರಸಿದವರ ಹಿರಿಮೆ ,
ಪಟ್ಟಿ ಮಾಡಲಳವೇ ಈ ಪಾಮರ ಅವರ ಗ್ರಂಥವಿಸ್ತಾರ ,
ಅವರಿಗವರೇ ಸಾಟಿ ಅವರೊಂದು ಜ್ಞಾನಸಾಗರ .

ಪ್ರಾತಃಸಂಕಲ್ಪ ಗದ್ಯವೊಂದೇ ಸಾಕು ಜನ್ಮಕ್ಕಾಗುವಷ್ಟು ಗಂಟು,
ಸರ್ವ ಸಮರ್ಪಣ ಗದ್ಯ ಸಾಲದೇ ಕಳಚಲು ಭವದ ಅಂಟು,
ರಾಮ ಕೃಷ್ಣಚಾರಿತ್ರ್ಯ ಮಂಜರಿ ಹೃದಯದಲಿ ಹರಿಯಲೇ ಬೇಕಾದ ಝರಿ,
ಮ.ಭಾ.ತಾ.ನಿ.ಭಾವಸಂಗ್ರಹ ಕಳೆವುದೆಲ್ಲ ಅರಿಗಳ ಉರಿ,
ಅವತಾರಗಳಲ್ಲಿ ಜ್ಞಾನ ಹರಿಸುತ್ತಾ ಕಾರುಣ್ಯ ತೋರಿದ ಗುರು,
ನಮ್ಮೊಳಗೆ ನಿಂತು ಜ್ಞಾನದೀಪ ಉರಿಸುತ್ತ ಹೆದ್ದಾರಿಯ ತೋರು .

ಬರೆದೆ ನೀ ವೇದಗಳಿಗೆ ಭಾಷ್ಯ,
ಕೊಟ್ಟೆ ಪುರುಷ-ಪಂಚಸೂಕ್ತಾದಿಗಳ ಹರುಷ,
ಪ್ರಸ್ಥಾನತ್ರಯಗಳ ಅಧ್ಯಯನದ ಕೊಡುಗೆ,
ಹರಸು ಗುರುವೇ ನಮಗಿತ್ತು ನೋಡುವ ಬಗೆ.

ಪ್ರಾರ್ಥನೆ

ಇಲ್ಲವೆಂದರೂ ಇದ್ದಾರೆ ನಿಜ ಕಳಕಳಿಯ ಮಂದಿ,
ಅಂಥವರ ಹಂಬಲ ಅಪಾರ ಹೋಗಿಲ್ಲವದು ಕುಂದಿ,
ನಿನ್ನ ನಿಜ ಭಕ್ತರೆಡೆಗೆ ಕಾರುಣ್ಯ ಹರಿಸು,
ತತ್ವಮಣಿಗಳನೀಯುತ ಪ್ರೀತಿಯಲಿ ಹರಸು.

(Contributed by Shri Govind Magal)

Saturday 30 January 2016

Bhava Guccha 12

ಭಾವ ಗುಚ್ಛ by “ತ್ರಿವೇಣಿ ತನಯ”

ಕಾಯ - ಕರ್ಮ - ಕಾಲ - ಕರುಣ

ಧರ್ಮ ಸಾಧನೆಗೆ ಕಾಯಬೇಕು,
ಸಂಸಾರದ ಕಾವಿನಲ್ಲಿ ಕಾಯಬೇಕು,
ಗುರು ಹರಿ ಕಾರುಣ್ಯಕೆ ಕಾಯಬೇಕು,
ಹಣ್ಣಾ? ಕಾಯಾ? ‘ಕಾಯಬೇಕು.

ಕಾಯಿ ಎನುತ ಕಾಯಿಸಲು ಬೇಡ ನೀನು,
ಕಾಯುತಿಹೆನಾದರೂ ಕಸಗಾಯಲ್ಲ ನಾನು,
ಮಾಗದಾ ಕಾಯವದು ಬಾಗುತಲಿದೆ ತಾನು,
ಮಾಗಿಸುತ ತೊಟ್ಟ ಕಳಚಲಾರೆಯಾ ನೀನು .

ನಿನ್ನೆ ನಾಳೆಗಳ ಚಿಂತೆ ಅನವರತ ,
ವರ್ತಮಾನದೊಳಿಲ್ಲ ಮನಸು ಸತತ,
ಭೂತ ಭವಿಷ್ಯಗಳ ಮರುಗುವಿಕೆ ಸಾಕು,
ಅಂತರಂಗ ಕಡೆಯುತ್ತಾ ಒಳಗೆ ಕಣ್ಹಾಕು.

ಏಕೆ ಬೆನ್ಹತ್ತಿರುವೆ ಸಿಗದು ಆ ಬಿಸಿಲ್ಗುದುರೆ,
ಮುದದಿಂದ ಹದಮಾಡು ಮನವೆಂಬ ಕುದುರೆ,
ಕೋಟೆ ಶಿಲಾಶಾಸನ ಕೆತ್ತಿಸಿದವರೆಲ್ಲಾ ಮಣ್ಣು,
ಇನ್ನಾದರೂ ಹೊರಮುಚ್ಚಿ ಒಳಹಾಕು ಕಣ್ಣು.

ಕಟ್ಟಿದ್ದು ನೀನಲ್ಲ ಕೊಟ್ಟದ್ದು ನೀನಲ್ಲ,
ಬೆಟ್ಟ ನದಿ ಮರಗಳ ನೆಟ್ಟಿದ್ದು ನೀನಲ್ಲ,
ಕಟ್ಟಕಡೆಯ ಪಯಣದಲಿ ಜೊತೆ ಯಾವುದೂ ಇಲ್ಲ,
ಸುಟ್ಟು ಬೂದಿಯಾಗೋ ಮುನ್ನ "ಹರಿ"ಯಲೀ ಕಟ್ಟೆಲ್ಲ.

(Contributed by Shri Govind Magal)

Friday 29 January 2016

Bhava Guccha 11

ಭಾವ ಗುಚ್ಛ by ತ್ರಿವೇಣಿ ತನಯ

ಜೀವನಯಜ್ಞ

ಅರಿತವರಿಗೆ ನಿತ್ಯ ಚಟುವಟಿಕೆಗಳದು ಜೀವನಯಜ್ಞ,
ಸರ್ವರೊಳು ನಿಂತು ಸಕಲವ್ಯಾಪಾರ ನಡೆಸುವವ ಸರ್ವಜ್ಞ,
ಈ ಅನುಸಂಧಾನವಿರೆ ಸತತ ಕರ್ಮಗಳ ಲೇಪವೆಲ್ಲಿ?
ಕರ್ಮಗಳ ಬಂಧನ ಕಳಚಲೊಮ್ಮೆ ಮತ್ತೆ ಮರುಜನ್ಮವೆಲ್ಲಿ?

ಸೃಷ್ಟಿವೈಚಿತ್ರ

ಈ ಸೃಷ್ಟಿಯೇ ತ್ರಿಪುಟಿಗಳ ಆಗರ ತ್ರಿಗುಣಗಳ ವಿಚಿತ್ರೋಗರ,
ಪ್ರತಿಕ್ಷಣವೂ ಪರಸ್ಪರ ಭೇದ ಅವಲಂಬಿತ ಪರಸ್ಪರ,
ಸ್ವಭಾವಕ್ಕನುಗುಣವಾಗಿ ನಡೆಸಿಹನು ಹರಿ ವ್ಯಾಪಾರ,
ಸಲ್ಲುವುದನೇ ಸಲ್ಲಿಸುವ ನ್ಯಾಯಾಧೀಶ ಮಂದರಧರ.

ಹುಡುಕಾಟ

ನಗುವಿರಲಿ ತುಟಿಯಲ್ಲಿ ನಯವಿರಲಿ ಮಾತಲ್ಲಿ,
ಮುದವಿರಲಿ ಮನದಲ್ಲಿ ಪ್ರೀತಿಯಿರಲಿ ಎದೆಯಲ್ಲಿ,
ಸಾಕು ಸಾಕು ತಪ್ಪು ಕೆಡುಕುಗಳ ಹುಡುಕಾಟ,
ನೀ ಹುಡುಕುವುದೇ ನಿನ್ನಲಿ ನೆಲೆಸುವುದದು ದಿಟ.

ಹಂಬಲ

ಓ ಭಗವಂತಾ ನೀನಾದರೋ ಸೀಮಾತೀತ,
ಎನ್ನ ಮನವಾದರೋ ಸೀಮಿತದಲ್ಲಿ ಸೀಮಿತ,
ಎಳೆದುಬಿಡು ಎನ್ನ ಚಿತ್ತವ ಸೀಮೆಯಾಚೆಗೆ,
ಒಗೆಯಲಾರೆಯಾ ಒಳಬಗೆಯ ಅರಿವ ಬಗೆ.

ನಿಜದ್ವಿಜ

ನಿತ್ಯದ ಬದುಕಾಗಬೇಕದು ಸಹಜ,
ಅದಾಗಲೇ ನೀನಾಗುವಿ ನಿಜ ದ್ವಿಜ,
ತಿದ್ದಲಾಗದ ಊರಗೊಡವೆ ನಿನಗೇಕೆ?

ನಿನ್ನ ನೀ ತಿಳಿವುದಕಿಂತ ಬೇರೊಂದು ಬೇಕೆ?

(Contributed by Shri Govind Magal)

Thursday 28 January 2016

Bhava Guccha 10

ಭಾವ ಗುಚ್ಛ by  “ತ್ರಿವೇಣಿ ತನಯ “


ಬ್ರಾಹ್ಮಣ್ಯ

ಯಾವುದು ಯಾವ ಥರದ್ದೀ ಬ್ರಾಹ್ಮಣ್ಯ?   
ಯಾವುದರಲ್ಲೂ ಕಿಂಚಿತ್ತಿಲ್ಲ ಕಾರುಣ್ಯ!
ಬ್ರಾಹ್ಮಣ ,ಕ್ಷಾತ್ರ ,ವೈಶ್ಯ -ಶೂದ್ರ,
ಏನಾದರಾಗಲಿ ಮೊದಲಾಗಬೇಕಲ್ಲವೇ ಆರ್ದ್ರ?

ಜುಟ್ಟು ಜನಿವಾರಗಳಲ್ಲಿಲ್ಲ ಬ್ರಾಹ್ಮಣ್ಯ,
ಅಂಗಾರಕ ಭಸ್ಮಗಳಲ್ಲಿಲ್ಲ ಬ್ರಾಹ್ಮಣ್ಯ,
ಪಟ್ಟೆಮಡಿ ಪಂಚೆಗಳಲ್ಲಿಲ್ಲ ಬ್ರಾಹ್ಮಣ್ಯ,
ಬ್ರಹ್ಮಜ್ಞಾನಕೆ ತುಡಿದು ತಪಿಸುವ ಜೀವದಲ್ಲಿದೆ ಬ್ರಾಹ್ಮಣ್ಯ .

ನಿರ್ದಿಷ್ಟ ಮಠಮಾನ್ಯಗಳ ಸ್ವತ್ತಲ್ಲ ಬ್ರಾಹ್ಮಣ್ಯ,
ಸರ್ವರಿಗೂ ಹಿತವೀವ ಜೀವನದಿ ಬ್ರಾಹ್ಮಣ್ಯ,
ಬಿದ್ದವರ ಮೇಲೆತ್ತುವ ಬೃಹತ್ ಯತ್ನವದು ಬ್ರಾಹ್ಮಣ್ಯ,
ವರ್ಣಕ್ಕನುಸಾರ ಕಾರುಣ್ಯ ತೋರುವುದೇ ಬ್ರಾಹ್ಮಣ್ಯ.

ಲೇಪ -ನಿರ್ಲೇಪ

ಫುಲ್ಲನಾಭನ ಸಂಗ ಇಲ್ಲದೇ ಇರಲೊಲ್ಲೆ,
ಒಲ್ಲೇ ದುರಿತಗಳ ನಾನೊಲ್ಲೆ-ದಾಸವಾಣಿ,
ಒಲ್ಲೆನೆಂದರೆ ಬರದಿದ್ದೀತೆ?ತಡೆಯಲಾದೀತೆ?
ಒಲ್ಲೆನೆಂದರೆ ಮನಕೆ ಒಲ್ಲೆ,ಲೇಪಒಲ್ಲೆ ಅಂತಿದ್ದೀತೆ!!

ಜೀವ -ಜನ್ಮ

ಕಲಿಯಲು ತಿಳಿಯಲು ಇರುವ ಜ್ಞಾನ ಅಗಾಧ,
ಚಿಂತೆ ಬೇಡ ತಿಳಿದುದರಲ್ಲಿ ಇರದಿರಲಿ ವಿರೋಧ,
"ಜೀವ"ನ ದೀರ್ಘ ಯಾತ್ರಾರೇಖೆಯಲಿ "ಜನ್ಮ"ವೊಂದು ಬಿಂದು,
ಜ್ಞಾನಬಿಂದು ಪೋಣಿಸುತ ರೇಖಾಂತ ತಲುಪುವಲ್ಲಿ ಬಾರದಿರಲಿ ಕುಂದು.

(Contributed by Govind Magal) 

Wednesday 27 January 2016

ತತ್ವವಾದಸ್ಯ ಪ್ರಮೇಯನವಮಾಲಿಕಾ ಸ್ತೋತ್ರ


ವಿಷ್ಣುಃ ಸರ್ವೋತ್ತಮೋsಥಾಖಿಲ ಪದಗದಿತಃ ಸರ್ವವೇದಾಭಿಧೇಯಃ
ಶ್ರೀನಾಥಃ ಸದ್ಗುಣಾಬ್ಧಿರ್ಜಗದುದಯಲಯಾದ್ಯಷ್ಟ ಕರ್ತಾಂತರಾತ್ಮಾ |
ಬ್ರಹ್ಮಾದ್ಯಾ ಉಚ್ಚನೀಚಾ ಹರಿಚರಣರತಾಃ ಪಂಚಭೇದಃ ಪ್ರಪಂಚಃ 
ಸತ್ಯ ಸ್ತ್ರೀಪುಂಸಭಾವಃ ಸತತಮನಪಗಾ ಯೋಗ್ಯತಾ ಚ ಸ್ವಭಾವಃ || ||

ಜೀವಾಸ್ತ್ರೈಗುಣ್ಯಭಾಜಃ ಪರಮಗತಿಯುಜೋ ನಿತ್ಯಬದ್ಧಾಸ್ತಮೋಗಾಃ
ಸತ್ವೋದ್ರೇಕಾತ್ತು ಮೋಕ್ಷೇ ನಿಜಸುಖನಿಯತಿಃ ಸಾಧನಂ ಜ್ಞಾನಭಕ್ತೀ |
ಇಷ್ಟಂ ದೈವಂ ಮುಕುಂದಃ ಪರಮಗುರುರಸೌ ಮಾರುತಿರ್ಮಧ್ವನಾಮಾ
ವಿಶ್ವಂ ತಾಭ್ಯಾಮುಭಾಭ್ಯಾಂ ನಿಯಮಿತಮಖಿಲಂ ಚೇತ್ಯಯಂ ತತ್ವವಾದಃ || ||

ಇಮಾಮಾಚಾರ್ಯಗೋವಿಂದೋ ವಿನೇಯಜನವಾಂಛಯಾ |
ವಿತೇನೇ ತತ್ವ ವಾದಸ್ಯ ಪ್ರಮೇಯನವಮಾಲಿಕಾಮ್ || ||

ಈ ಪ್ರಮೇಯನವಮಾಲಿಕೆಯು ಶ್ರೀಮಧ್ವಾಚಾರ್ಯರು ತಮ್ಮ ತತ್ವವಾದ ಮೂಲಕ ಮನುಕುಲಕ್ಕೆ ನೀಡಿದ ಅಪೂರ್ವ ಕೊಡುಗೆಗಳ ಸಂಗ್ರಹ ಮಾಲಿಕೆ.

ವಿದ್ಯಾವಾಚಸ್ಪತಿ, ವಿದ್ಯಾರತ್ನಾಕರ ಹಾಗೂ ಭಾರತ ಸರಕಾರದ ಪದ್ಮಶ್ರೀ ಗೌರವಕ್ಕೂ ಪಾತ್ರರಾದ ಪೂಜ್ಯರಾದ ಡಾ||ಬನ್ನಂಜೆ ಗೋವಿಂದಾಚಾರ್ಯರ  ವಾಣಿಯಿಂದ ಬಂದ ಸುಂದರ ಪದಪುಂಜಗಳ ರಚನೆ ಇದು.  ಪ್ರಮೇಯನವಮಾಲಿಕಾ ಸ್ತೋತ್ರದ ಮೇಲೆ ಅವರು ನೀಡಿದ ಪ್ರವಚನದಿಂದ ಈ ಲೇಖನವನ್ನು ಸಿದ್ಧಪಡಿಸಲಾಗಿದೆ....

ಅಪೌರುಷೇಯವಾದ ವೇದಗಳು ಯಾರನ್ನು ಶ್ರೇಷ್ಠ ಅಥವಾ ಸರ್ವೋತ್ತಮ ಅಂತ ಹೇಳುತ್ತವೋ, ಜಗತ್ತಿನ ಎಲ್ಲ ಶಬ್ದಗಳೂ, ಎಲ್ಲ ದೇವತೆಗಳ ಹೆಸರುಗಳೂ ಯಾವ ಏಕ ಮಾತ್ರ ಭಗವಂತನನ್ನು ಹೇಳುತ್ತವೋ, ಅಂಥವನನ್ನು ವೇದಗಳು "ವಿಷ್ಣು" ಅಂತ ಕರೆಯುತ್ತವೆ. ಆದ್ದರಿಂದ "ವಿಷ್ಣು ಸರ್ವೊತ್ತಮ".

ಆ ವಿಷ್ಣುವೇ ಸರ್ವ ನಾಮಗಳ ಅರ್ಥ- "ಅಖಿಲ ಪದಗದಿತಃ", ಎಲ್ಲ ಪದಗಳಿಂದ ಕರೆಯಲ್ಪಡುವವ, ಸರ್ವಶಬ್ದ ವಾಚ್ಯ.
ಅವನೇ "ಸರ್ವವೇದಾಭಿಧೇಯಃ" ಅಂದರೆ, ಎಲ್ಲ ವೇದಗಳಿಂದ ತಿಳಿಯಲ್ಪಡುವವ, ವೇದಗಳ ಸಾರ.

ಲಕ್ಷ್ಮೀದೇವಿಯನ್ನು ಪತ್ನಿಯಾಗಿ ಉಳ್ಳ ನಾರಾಯಣನೇ "ಶ್ರೀನಾಥ". ಅವನೇ ಅನಂತ ಸದ್ಗುಣಗಳ ಸಾಗರ "ಸದ್ಗುಣಾಬ್ಧಿಃ".
ಈ ಚೇತನಾಚೇತನಾತ್ಮಕ ಪ್ರಪಂಚಕ್ಕೆ ಸೃಷ್ಟಿ,ಸ್ಥಿತಿ,ಸಂಹಾರ,ನಿಯಮನ, ಜ್ಞಾನ,ಅಜ್ಞಾನ,ಬಂಧ ಮತ್ತು ಮೋಕ್ಷವೆಂಬ ಎಂಟರ ನಂಟನ್ನೂ ಬೆಸೆಯುವ ನಾರಾಯಣನೇ "ಜಗದುದಯಲಯಾದ್ಯಷ್ಟಕರ್ತ" ಇವನೇ ಸಕಲ ಜೀವರ ಅಂತರ್ಯಾಮಿ ಎನಿಸಿದ "ಅಂತರಾತ್ಮ".

ಜಗತ್ತಿನ ಆದಿ ದಂಪತಿಗಳು ಲಕ್ಷ್ಮೀನಾರಾಯಣರು. ಅವರ ಮೊದಲ ಮಗ ಚತುರ್ಮುಖ ಬ್ರಹ್ಮ. ಈ ಚತುರ್ಮುಖ ಬ್ರಹ್ಮನೇ ಮೊದಲ್ಗೊಂಡು "ಬ್ರಹ್ಮಾದ್ಯಾ", ಎಲ್ಲ ತತ್ವಾಭಿಮಾನಿ ದೇವತೆಗಳೂ ಕೂಡ ಶ್ರೀಹರಿಯ ಪಾರಮ್ಯವನ್ನು ಅರಿತು ಸೇವೆಗೈಯುವವರು ಆದ್ದರಿಂದ "ಹರಿಚರಣರತಾಃ" ಶ್ರೀಹರಿಯ ಚರಣದಾಸರು.

ಇಂಥಹ ತತ್ವಾಭಿಮಾನಿ ದೇವತೆಗಳಲ್ಲಿಯೂ ತರತಮಭಾವ ಇದೆ.  "ಬ್ರಹ್ಮಾದ್ಯಾ ಉಚ್ಚನೀಚಾ" ಎಂಬಂತೆ ದೇವತಾ ತಾರತಮ್ಯವನ್ನು ಪ್ರಪಂಚಕ್ಕೆ ಪರಿಚಯಿಸಿದವರು ಶ್ರೀಮಧ್ವಾಚಾರ್ಯರು ಮಾತ್ರ..

ಹಾಗೆಯೇ ಈ ಪ್ರಪಂಚದಲ್ಲಿ ಒಂದರಂತೆ ಇನ್ನೊಂದಿಲ್ಲ... ಪ್ರತಿಯೊಂದು ಸಂಗತಿಯೂ ಭಿನ್ನ ಭಿನ್ನವಾಗಿದೆ ಎಂದು ಹೇಳಿ, ಭಗವಂತ -ಜೀವ-ಜಡ ಪ್ರಪಂಚದ ಐದು ಭೇದಗಳನ್ನು ಪ್ರತಿಪಾದಿಸಿದವರು ಆಚಾರ್ಯ ಮಧ್ವರು ಮಾತ್ರ.

ಜೀವ-ಈಶ್ವರ ಭೇದ, ಜಡ-ಈಶ್ವರ ಭೇದ, ಜಡ-ಜಡ ಭೇದ, ಜೀವ-ಜೀವ ಭೇದ, ಜೀವ-ಜಡ ಭೇದ. ಇವೇ "ಪಂಚಭೇದ ಪ್ರಪಂಚಃ".

ಭಗವಂತನಿಂದ ಸೃಷ್ಟವಾದ ಈ ಜಗತ್ತು "ಸತ್ಯಃ" ಸತ್ಯವಾಗಿ ಇರುವಂತದು. ಇಂತಹ ಜಗತ್ತಿನಲ್ಲಿ ಹುಟ್ಟಿದ ಜೀವರಾಶಿಗಳಿಗೆ ಹೆಣ್ಣು-ಗಂಡು ಎಂಬ ಎರಡು ಲಕ್ಷಣಗಳಿವೆ, "ಸ್ತ್ರಿ-ಪುಂಸ ಭಾವಃ". ಲಿಂಗ ಇರುವುದು ಜೀವಕ್ಕೇ ಹೊರತು ಜಡವಾದ ಶರೀರಕ್ಕಲ್ಲ ಎಂದು ಹೇಳಿದವರು ಶ್ರೀಮಧ್ವಾಚಾರ್ಯರು ಮಾತ್ರ.

ಭಗವಂತನ ದೃಷ್ಟಿಯಲ್ಲಿ ಎಲ್ಲ ಜೀವರೂ ಸಮಾನರು "ಸತತಮನಪಗಾಃ", ಆದರೆ ಪ್ರತಿಯೊಂದು ಜೀವಕ್ಕೂ ಅದರದ್ದೇ ಆದ 'ಸ್ವಭಾವ' ಇದೆ. ಅದರದರ ಸ್ವಭಾವಕ್ಕೆ ತಕ್ಕಂತೆ ಆಯಾ ಜೀವದ ಸ್ಥಿತಿ-ಗತಿಗಳು "ಯೋಗ್ಯತಾ ಚ ಸ್ವಭಾವಃ"...

ಅನಂತ ಜೀವರೂ ಮೂರೇ ತರ. "ಜೀವಾಸ್ತ್ರೈಗುಣ್ಯಭಾಜಃ" ಸತ್ವ , ರಜಸ್ಸು ತಮಸ್ಸೆಂಬ ಮೂರು ಗುಣಗಳ ಮಿಶ್ರಣದಲ್ಲಿ ಕಲೆತ ಜೀವರಲ್ಲಿ ಕೆಲವರು ಸಾತ್ವಿಕರು "ಪರಮಗತಿಯುಜಃ" ಅಂದರೆ ಮೋಕ್ಷಯೋಗ್ಯರು. ಕೆಲವರು ರಾಜಸರು "ನಿತ್ಯಬದ್ಧಾಃ" ನಿತ್ಯ ಸಂಸಾರಿಗಳು, ಮತ್ತೆ ಕೆಲವರು ತಾಮಸರು "ತಮೋಗಾಃ" ತಮೋಯೋಗ್ಯರು...

ಸಾತ್ವಿಕರಲ್ಲಿ "ಸತ್ವೋದ್ರೇಕಾತ್ತು ಮೋಕ್ಷೆ" ಸತ್ವಗುಣ ಸಂಪೂರ್ಣ ಜಾಗೃತಗೊಂಡು, ಸಾತ್ವಿಕತೆಯ ತುತ್ತತುದಿಯನ್ನೇರಿದಾಗ ಮೋಕ್ಷವೆಂಬ "ನಿಜಸುಖನಿಯತಿಃ" ನೈಜಸುಖವನ್ನು ಅರ್ಥಾತ್ ಸ್ವರೂಪಾನಂದವನ್ನು ಪಡೆಯುತ್ತಾರೆ.

ಅಂಥಹ ಸಾಧನೆಗೆ ನಮ್ಮಲ್ಲಿ ಮುಖ್ಯವಾಗಿ ಇರಬೇಕಾದದ್ದು, "ಸಾಧನಂ ಜ್ಞಾನಭಕ್ತೀ" ಭಗವಂತನ ಬಗೆಗೆ  ಜ್ಞಾನದಿಂದ ಕೂಡಿದ ಪರಮಭಕ್ತಿ.

ಇಂತಹ ಬದುಕು ನಮ್ಮದಾಗಬೇಕಾದರೆ ನಮಗೆ ಬೇಕು "ಇಷ್ಟಂ ದೈವಂ ಮುಕುಂದಃ" ಇಷ್ಟದ ದೇವರು ಮುಕುಂದ, ಅವನೇ ಮೋಕ್ಷಪ್ರದನಾದ 'ನಾರಾಯಣ'. ಜೊತೆಗೆ ಮಾರ್ಗದರ್ಶಕರಾಗಿ ಇರಬೇಕು "ಪರಮಗುರುರಸೌ ಮಾರುತಿರ್ಮಧ್ವನಾಮಾ" ನಮ್ಮೆಲ್ಲರಿಗೂ ಪರಮಗುರುಗಳಾಗಿ ಆಚಾರ್ಯ ಮಧ್ವರಾಗಿ ಅವತರಿಸಿದ ಪ್ರಾಣದೇವರು.

"ವಿಶ್ವಂ ತಾಭ್ಯಾಮುಭಾಭ್ಯಾಂ" ಇಡೀ ವಿಶ್ವ ,ಭಗವಂತನ ಇಚ್ಛೆಗನುಗುಣವಾಗಿ, ಈ ಎರಡು ಶಕ್ತಿಗಳ ಮೂಲಕ "ನಿಯಮಿತಮಖಿಲಂ" ಸಂಪೂರ್ಣ ನಿಯಂತ್ರಣಕ್ಕೊಳಪಟ್ಟು  ಚಲಿಸುತ್ತಾ ಇದೆ. "ಚೇತ್ಯಯಂ ತತ್ವವಾದಃ" ಇದೇ ಆಚಾರ್ಯ ಮಧ್ವರು ಮನುಕುಲಕ್ಕಿತ್ತ. "ತತ್ವವಾದ"...

ತತ್ವವಾದದ ಪ್ರಮೇಯಗಳೆಂಬ  "ನವರತ್ನಮಾಲೆಯ" ಈ ಎರಡು ಶ್ಲೋಕಗಳನ್ನು ಕೇವಲ ಜ್ಞಾನ ತೃಷೆಯುಳ್ಳವರ ಕೋರಿಕೆಯ ಮೇರೆಗೆ ಪೂಜ್ಯ ಶ್ರೀ ಬನ್ನಂಜೆ ಗೋವಿಂದಾಚಾರ್ಯರು ನಮಗೆಲ್ಲ  ಕರುಣಿಸಿದ್ದಾರೆ... ವಿದ್ವಜ್ಜನರಿಂದ ಶ್ರೀಮದಾಚಾರ್ಯರ ತತ್ವವಾದದ ಕೀರ್ತಿ ಎಲ್ಲೆಡೆ ಹಬ್ಬಲಿ ಎಂದು ಪ್ರಾರ್ಥಿಸೋಣ...
(Contributed by Shri B.S.Harish)

Bhava Guccha 09

ಭಾವ ಗುಚ್ಛ by "ತ್ರಿವೇಣಿ ತನಯ"

ದಾಸ್ಯ -ಲಾಸ್ಯ

ನೈಜ ಭಕ್ತಿ ವೈರಾಗ್ಯಗಳಿರುವಲ್ಲಿ ಐಶ್ವರ್ಯದ ದಾಸ್ಯ,
ಲಕ್ಷ್ಮಿಪತಿ ನಿಜದಾಸನಾದವನಿಗೆ ಎಲ್ಲ ತಿಳಿವಿನ ಲಾಸ್ಯ,
ಸಾಮಾನ್ಯ ಅಲ್ಲ ಅಂಥವರು ಬಹಳ ಅಪರೂಪ,
ಕತ್ತಲಾಗಸದಲ್ಲಿ ಹೊಳೆವ ಜ್ಯೋತಿ ಸ್ವರೂಪ.


ಕಣ್ಮನ

ಹರಿನಾಮದರಗಿಣಿಯು ಹಾರುತಿದೆ ಜಗದಿ,
ದಾಸರು ಅನುಭವಿಸಿ ಕೊಟ್ಟ ಪಂಕ್ತಿಯದು ಮುದದಿ,
ನೋಡುವ ಕಣ್ಣಿರಲಿ ಮನಸದು ತಿಳಿಯಿರಲಿ,
ಈ ಪರಿಯ ಬಾಳಿನಲಿ ಸುಳಿಯನವ ಹತ್ತಿರ ಕಲಿ.


ಸ್ವಾತಂತ್ರ್ಯ

ಅನೇಕರ ತ್ಯಾಗ ಬಲಿದಾನಗಳಿಂದ ಬಂದಿದೆ ಸ್ವಾತಂತ್ರ್ಯ,
ಇಂದಾದರೂ ಸ್ಮರಿಸಿ ನಮಿಸೋಣ ಅವರ ಕ್ಷಣಮಾತ್ರ ,
ನಿಜಾರ್ಥದ ಸ್ವಾತಂತ್ರ್ಯವಿರಲಿ ಆಗದಿರಲಿ ಸ್ವೇಚ್ಛಾಚಾರ,
ಹಾಕೋಣ ಬದ್ಧತೆಯಿಂದ ಭಾರತಾಂಬೆಗೆ ಸತ್ಸಂಕಲ್ಪದ ಹಾರ .
ಬೇಡೋಣ ಭವಬಂಧನದಿಂದ ಸ್ವಾತಂತ್ರ್ಯ,
ಸತತ ಪ್ರಯತ್ನದೊಂದಿಗಿರಲಿ ಹರಿನಾಮ ಮಂತ್ರ,
ಬಾಳಾಗಲಿ ಸದಾಚಾರ ಸಮರ್ಪಣೆಗಳ ಯಾತ್ರ,
ರಕ್ಷಿಸಲಿ "ಗೋವಿಂದ"ನಮಗಿತ್ತು ಗುರುಮಂತ್ರ.


ಬಿಂಬ -ಪ್ರತಿಬಿಂಬ

ಬರೆವುದು ಒಳಗಿರುವ ಬಿಂಬ,
ದೇಹವಿದು ಉಪಕರಣ ಕಂಬ,
ಬೇಡ ಸಲ್ಲದ ಒಣ--- ಜಂಬ,
ಬಿಂಬದ ನೆರಳು -ಪ್ರತಿಬಿಂಬ.

Tuesday 26 January 2016

Narasimha Stuti - ಹೇಳದೇ ಉಳಿದದ್ದು The Unsaid, Post Script

ಹೇಳದೇ ಉಳಿದದ್ದು....
ಆಚಾರ್ಯರ ಈ ಸ್ತೋತ್ರ ಶುರುವಾಗುವುದು ಸ್ಥಂಭಂ ನಿರ್ಭಿದ್ಯ ಎಂದು. ಅಂದರೆ, ಸ್ಥಂಭವನ್ನು ಸೀಳಿ ಬಂದ ನರಸಿಂಹನ ಸ್ತೋತ್ರ.
ನರಸಿಂಹ ನಿಜವಾಗಿ ಸೀಳಿದ್ದು ಯಾವ ಸ್ಥಂಭ ? ಮೊದಲಿಗೆ, ಸ್ಥಂಭ ಎಂದರೇನು ಎಂದು ತಿಳಿಯೋಣ.
ಸ್ಥಂಭ- ಶಬ್ದ ನಿಷ್ಪನ್ನವಾದದ್ದು ಸ್ಥಭಿ- ಪ್ರತಿರೋಧೇ ಎಂಬ ಧಾತುವಿನಿಂದ. ಅರ್ಥ - ಪ್ರತಿರೋಧ ಒಡ್ಡುವಂಥದ್ದು ಎಂದು. ಅದಕ್ಕೇ, ಒಂದು ಕಟ್ಟಡವು ಯಾವ ಒತ್ತಡಕ್ಕೂ ಬೀಳದಹಾಗೆ ಎಲ್ಲಾ ಒತ್ತಡಗಳಿಗೂ ಪ್ರತಿರೋಧ ಒಡ್ಡುವಂಥ ಕಂಬವನ್ನು ಸ್ಥಂಭ ಎಂದು ಕರೆಯುವುದು.
ಇಲ್ಲೂ ಕೂಡ ಮೇಲ್ನೋಟಕ್ಕೆ ನರಸಿಂಹ ಸ್ಥಂಭವನ್ನು ಸೀಳಿಕೊಂಡು ಬಂದ ಎಂದೇ ಅನ್ನಿಸುತ್ತದೆ. ಆದರೆ, ಶಬ್ದದ ನಿರ್ವಚನದ ಆಳಕ್ಕಿಳಿದರೆ ಅಪೂರ್ವ ಅರ್ಥ ಹೊಳೆಯಬಲ್ಲುದು. ಹೇಗೆಂದರೆ, ಪ್ರಹ್ಲಾದನಂಥ ಒಬ್ಬ ಭಗವದ್ಭಕ್ತ, ಒಬ್ಬ ಸಾಧಕಜೀವ ತನ್ನ ಬಿಂಬರೂಪೀ ಭಗವಂತನ ಬಳಿಗೆ ಹೋಗಲಾರದಂತೆ ಪ್ರಬಲವಾಗಿ ಪ್ರತಿರೋಧ ಒಡ್ಡುವ ಶಕ್ತಿಯಾಗಿ ಹಿರಣ್ಯ ಕಶಿಪು ನಿಂತಿದ್ದ. ಹಾಗಾಗಿ ಭಗವಂತ, ತನ್ನ ಭಕ್ತನಿಗೂ ತನಗೂ ಅಡ್ಡವಾಗಿ ನಿಂತಿದ್ದ ಸ್ಥಂಭದಂಥ ಹಿರಣ್ಯ ಕಶಿಪುವನ್ನು ನಿರ್ಭಿದ್ಯ - ಸೀಳಿ, ನಿರ್ಯತ್ - ಬಂದ.
ಈ ಅರ್ಥವನ್ನೂ ಕೂಡ ಈಗ ನಡೆಯುತ್ತಿರುವ ಮಾಂತ್ರಿಕೀ ಉಪನಿಷತ್ ಪ್ರವಚನದಲ್ಲಿ ಆಚಾರ್ಯರು ಬಿಡಿಸಿ ಹೇಳಿದ ಸ್ಥಂಭ ಶಬ್ದದ ನಿರ್ವಚನದ ಆಧಾರದಿಂದಲೇ ಅನುಸಂಧಾನ ಮಾಡಿದ್ದು.
ಹೀಗೆ, ನಾವು ಕೇಳುವುದಕ್ಕೂ ಮುನ್ನವೇ ನಮ್ಮನ್ನು ಸರಿಯಾದ ಅರ್ಥಾನುಸಂಧಾನದ ದಾರಿಗೆ ತರುತ್ತಿರುವ ಆಚಾರ್ಯರ ಅನುಗ್ರಹ ನಿಜಕ್ಕೂ ಅನನ್ಯ.
ನರಸಿಂಹಾಷ್ಟಕದಂಥ ಒಂದು ಅಪೂರ್ವ ಕೃತಿಯ ಅರ್ಥಾನುಸಂಧಾನದ ಭಾಗ್ಯ ದೊರೆತದ್ದು ಕೂಡ ಆಚಾರ್ಯರು ಮತ್ತು ಇತರ ಆಚಾರ್ಯರು ಅನುಗ್ರಹಿಸಿದ ಜ್ಞಾನದ ಕಡಲಿನ ಒಂದು ತುಣುಕು ನನ್ನ ಮೇಲೆ ಬಿದ್ದ ಪುಣ್ಯದಿಂದಲೇ ಎಂಬ ನಮ್ರತೆಯೊಂದಿಗೆ ಈ ಅರ್ಥ ಚಿಂತನೆಯನ್ನು ಇಂದಿಗೆ ತಾತ್ಕಾಲಿಕವಾಗಿ ಮುಗಿಸುತ್ತೇನೆ. ನಮ್ಮನ್ನು ಭಗವಂತನೆಡೆಗೆ ಹೋಗದಂತೆ ತಡೆಯುವ ಅಜ್ಞಾನಾದಿ ಸ್ಥಂಭಗಳನ್ನೂ ಸಹ, ಆ ಭಗವಂತ ಸೀಳಿ, ಅವನೆಡೆಗೆ ನಮ್ಮ ದಾರಿಯನ್ನು ವ್ಯಸ್ಥೆಮಾಡಿ ಅನುಗ್ರಹಿಸಲೆಂದು ಪ್ರಾರ್ಥಿಸುತ್ತಾ,
ಇಷ್ಟು ದಿವಸ ನನ್ನೊಂದಿಗೆ ಸಹಕರಿಸಿದ ಶ್ರೀ ಪ್ರಸಾದ್ ಅವರಿಗೆ ಹಾಗೂ, ನನ್ನ ಪ್ರಯತ್ನವನ್ನು ಮೆಚ್ಚಿ ಉತ್ತೇಜಿಸಿದ ಬಳಗದ ಗೆಳೆಯರಿಗೆ ಹೃತ್ಪೂರ್ವಕ ವಂದನೆಗಳನ್ನು ಅರ್ಪಿಸುತ್ತೇನೆ. ಶ್ರೀ ಕೃಷ್ಣಾರ್ಪಣಮಸ್ತು.
(Contributed by Shri B R Krishna)
****

Bhava Guccha 08

ಭಾವ ಗುಚ್ಛ by “ತ್ರಿವೇಣಿ ತನಯ”

ಪ್ರೇಕ್ಷಕ

ನಾನು ನನ್ನದೆಂಬುದೇ ಎಲ್ಲ ನೋವಿಗೂ ಮೂಲ,
ಅದು ಹರಿದು ದೂರಾಗುತಲಿರೆ ಮನಸು ಪ್ರಫುಲ್ಲ,
ಮಾಗಿದ ಮನವರ್ಪಿಸು ಹರಿಪಾದದಲ್ಲಿ,
ಮುಂದಿನದವನ ಕೆಲಸ ಬರೀ ಪ್ರೇಕ್ಷಕ ನೀನಿಲ್ಲಿ .

ಅಂತರಂಗದ ಕೀಲಿ

ಕೇಳುತಾ ತಿಳಿ ಮಾಡುತಾ ಕಲಿ,
ಕೇಳುತಾ ಮಾಡುತಾ ಬಿಚ್ಚು ಅಂತರಂಗದಗುಳಿ,
ಅಂತರಂಗವ ಬೆದಕು ಹುಡುಕು ತಾಳ್ಮೆ ತಾಳಿ,
ಅಲ್ಲೇ ಇದೆ ಒಳ-ತಿಳಿಗಣ್ಣುಗಳ ಕೀಲಿ.

ಇರವು -ಅರಿವು

ಪರಮ ಪಾವನ ನೀನು ಓ ವ್ಯೋಮಕೇಶ,
ಹರಿಯ ಪ್ರಿಯ ಮೊಮ್ಮಗನಲ್ಲವೇ ತತ್ಪುರುಷ,
ನಿನ್ನ "ಇರವಿನಅರಿವಿ"ರೆ ಮನವದು ಸೊಗಸು,
ಸತತ ಆ ಅರಿವಿತ್ತು ರಾಮನಾಮ ನುಡಿಸು.

ಮೌನ

ತೂಕವಿಲ್ಲದ ಮಾತು,
ಮನದಗಡಿಗೆಯ ತೂತು,
ಇರಲಿ ಸದ್ಭಾವದಲೆಯ ಮೌನ,
ಅದಕಿದೆ ಎಲ್ಲೆಲ್ಲೂ ಸಮ್ಮಾನ.

ಜೀವ ಸ್ವಭಾವ

ನಡೆದಿದೆ ಜಗದೊಳು ಜೀವಸ್ವಭಾವಗಳ ಮೆರೆವಣಿಗೆ,
ಪ್ರಕಟವಾಗುತಲಿವೆ ಅವು ಹೇಗಿವೆಯೋ ಹಾಗೆ,
ಅದಲ್ಲವೇ ತತ್ವವಾದದ ಸ್ವಭಾವ ವಿಕಾಸವಾದ,

ಸೇರುವರವರವರ ಗತಿ ತಮ ಮಧ್ಯಮ ಉತ್ತಮ ಹರಿಪಾದ.
(Contributed by Shri Govind Magal)

Monday 25 January 2016

Bhava Guccha 07

ಭಾವ ಗುಚ್ಛ by “ತ್ರಿವೇಣಿ ತನಯ”

ಸುಖ

ಸುಖವೆಂಬುವುದು ದೇಹಕ್ಕಲ್ಲ ಮನಸ್ಸಿಗೆ,
ಕೊಡಲಾರವದನ ಧನ ಮನೆ ಮಾಳಿಗೆ ,
ಹಳಹಳಿಸದೇ ಬಂದದುಂಬುದೇ ಸುಖ,
ಅದನ್ನೂ ಮೀರಿದ ಬಾಳದು ಅಂತರ್ಮುಖ!!!

ಇಂಧನ

ತತ್ವಸಾಕಾರಕ್ಕೆ ಬೇಕಿಲ್ಲ ಹೆಸರು ಹುದ್ದೆ ಧನ,
ಬಾಳಬಂಡಿ ಎಳೆವುದಕೆ ಬೇಕು ಅಧ್ಯಾತ್ಮದಿಂಧನ,
ಆ ಇಂಧನವಿರೆ ಬಾಳಪಯಣವದು ಸರಾಗ,
ಇಂಧನದ ಕ್ಷಮತೆಯದು ಆವೇಗವಿರದ ವೇಗ.

ಸಂಪ್ರದಾಯ

ಏನೆಲ್ಲ ನಡೆಯುತಿದೆ ಪದ್ಧತಿ ಸಂಪ್ರದಾಯವೆಂದು,
ಯೋಚಿಸಿ ನೋಡಲು ತಾಳೆಯೇ ಇಲ್ಲ ಒಂದಕ್ಕೊಂದು,
ಹಿನ್ನಲೆ ಅರ್ಥವಿಲ್ಲದ್ದು ಅದು ಎಂಥ ಆಚಾರ,
ಏನೇ ಮಾಡು ಮಂಥನದ ತಿಳಿವಿರಲಿ ಸಾರಾಸಾರ.

ಮಡಿ

ಮಡಿ ಮಡಿ ಎನ್ನುತ ಅಡಿಗಡಿಗೆ ಹಾರು ,
ವ್ಯರ್ಥವಾಯಿತಷ್ಟೇ ಕೊಡ ತಪ್ಪಲೆ ನೀರು,
ಮನಗುಡಿಸಿ ಮಡಿಯಾಗು ಅದು ಪರಮ ಶುದ್ಧಿ,
ಪರಮಾತ್ಮನನುಗ್ರಹಕೆ ಅದೇ ಮೊದಲ ಸಿದ್ಧಿ.

ದೀಕ್ಷೆ

ಹರಿ ನಿನ್ನ ಸ್ಮರಣೆಯಲಿರಲಿ ಈ ಬಾಳು,
ಲೇಪವಾಗದದು ಭವದ ಈ ಗೋಳು,
ಶಾರಣ್ಯ ಒಂದೇ ನೀನಿತ್ತಿರುವ ಭಿಕ್ಷೆ,
ಕಾರುಣ್ಯದಲಿ ಅದನೆ ಮಾಡು ದೀಕ್ಷೆ.

(Contributed by Shri Govind Magal)

Narasimha Stuti 08

ಶ್ಲೋಕ - 8.
ಇಮಮಾಚಾರ್ಯ ಗೋವಿಂದೇ
ಸನ್ನಿಧಾಯ ಹರಿಸ್ತವಮ್ |
ರಚಯಾಮಾಸತು: ಪ್ರೇಮ್ಣಾ 
ಪ್ರಾಣನಾರಾಯಣೌ ಸ್ವಯಮ್ ||

ಪದಚ್ಛೆದ:

ಇಮಮ್ . ಆಚಾರ್ಯಗೋವಿಂದೇಸನ್ನಿಧಾಯ . ಹರಿಸ್ತವಮ್ ರಚಯಾಮಾಸತು: . ಪ್ರೇಮ್ಣಾ.   ಪ್ರಾಣನಾರಾಯಣೌ ಸ್ವಯಮ್ .

ಅನ್ವಯಾರ್ಥ:

ಆಚಾರ್ಯಗೋವಿಂದೇ - ಆಚಾರ್ಯಗೋವಿಂದನಲ್ಲಿ, ಸ್ವಯಂ - ಸಾಕ್ಷಾತ್ಪ್ರಾಣನಾರಾಯಣೌ - ವಾಯುದೇವರು 
ಮತ್ತು  ನಾರಾಯಣರಿಬ್ಬರೂ, ಸಂನಿಧಾಯ - ವಿಶೇಷವಾಗಿ ಇದ್ದುಕೊಂಡು, ಪ್ರೇಮ್ಣಾ - ಪ್ರೀತಿಯಿಂದ, ಇಮಂ ಹರಿಸ್ತವಂ - ಈ, ಹರಿಯ ಸ್ತೋತ್ರವನ್ನು, ರಚಯಾಮಾಸತು: - ರಚನೆ ಮಾಡಿಸಿದರು.

ತಾತ್ಪರ್ಯ : ಸಾಕ್ಷಾತ್ ಪ್ರಾಣ ನಾರಾಯಣರಿಬ್ಬರೂ ಪ್ರೀತಿಯಿಂದ ಆಚಾರ್ಯ ಗೋವಿಂದ ಎಂಬುವವರಲ್ಲಿ ವಿಶೇಷವಾಗಿದ್ದುಕೊಂಡು ಹರಿಯ ಈ ಹಾಡನ್ನು ರಚನೆಮಾಡಿಸಿದರು.

ಅನುಷ್ಟುಪ್ ಛಂದಸ್ಸಿನಲ್ಲಿರುವ ಈ ಶ್ಲೋಕದಲ್ಲಿ, ಈ  ಸ್ತೋತ್ರವನ್ನು ರಚಿಸಿದ್ದು ತಾವಲ್ಲವೆಂದೂ, ತಮ್ಮ ಮೇಲಿನ ಪ್ರೀತಿಯಿಂದ ಸಾಕ್ಷಾತ್ ವಾಯುದೇವರು ನಾರಾಯಣರಿಬ್ಬರೂ ತಮ್ಮಲ್ಲಿದ್ದುಕೊಂಡು ಹರಿಯ ಈ  ಸ್ತೋತ್ರವನ್ನು ರಚನೆಮಾಡಿಸಿದರೆಂದು ಆಚಾರ್ಯ ಗೋವಿಂದ ಎಂಬ ಈ ಕೃತಿಕಾರರು  ನಮ್ರವಾಗಿ  ನಿವೇದಿಸಿಕೊಂಡಿದ್ದಾರೆ.
****
Ślōka - 08

इममाचार्य गोविन्दे
सन्निधाय हरिस्तवम् |
रचयामास्तुः प्रेम्णा
प्राणनारायणौ स्वयम् ||

imamācārya gōvindē 
sannidhāya haristavam |
racayāmāsatu:
prēmṇā 
prāṇanārāyaṇau svayam ||

Padacchēda:

इममाचार्य . गोविन्दे . सन्निधाय . हरिस्तवम् . रचयामास्तुः . प्रेम्णा . प्राणनारायणौ . स्वयम्
imamācārya . gōvindē . sannidhāya . haristavam . racayāmāsatu: . prēmṇā . 
prāṇanārāyaṇau
. svayam .

Word Meanings:

इम आचार्यगोविन्दे (ācāryagōvindē) – in Acharya Govinda; स्वयम्(svayam) – directly; प्राणनारायणौ(prāṇanārāyaṇau) – the twosome of Vayudevaru and Narayana; सन्निधाय(sannidhāya) – residing in a special way; प्रेम्णा(prēmṇā) – with love; इमं हरिस्तवम्(imam haristavam) – this stotra of Hari; रचयामास्तुः(racayāmāsatuh) – made to compose

Tātparya:

Vayudevaru and Narayana, directly having conferred their loving blessings, upon the one named Ācharya Gōvinda, he was moved by them, to compose this paean.

In this ślōka set to anutup chandas, the composer, Ācharya Gōvinda, has admitted with all humility, that he did not compose this stōtra. He has attributed the composition to the indwelling Hari’s inspiration and to the love showered directly on him by both, Vāyudevaru and Nārāyaa.